Thursday, April 8, 2021

"ನೇತಾಜಿ ಸುಭಾಷ್ ಚಂದ್ರಬೋಸ್"


 "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು"ಎಂಬ ಹೇಳಿಕೆಯ ಮೂಲಕ ದೇಶಪ್ರೇಮದ ಕಿಚ್ಚನ್ನು ಜಾಗೃತಿ ಮೂಡಿಸಿದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರಬೋಸ್.

ಬಾಲ್ಯ- ವಿದ್ಯಾರ್ಥಿ ಜೀವನ

   ಬೋಸರು 1897 ಜನವರಿ 23 ರಂದು ಒಡಿಶಾದ ಕಟಕ್ ನಲ್ಲಿ ಜನಿಸಿದರು.ತಂದೆ ಜಾನಕಿನಾಥ್ ಬೋಸ್ ಮತ್ತು ತಾಯಿ ಪ್ರಭಾವತಿ.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಟಕ್ ನ ರಯವೆನಶಾ ಕೊಲಿಜಿಯೇಟ್ ಶಾಲೆಯಲ್ಲಿ ಪೂರೈಸಿದರು.ನಂತರ ಪದವಿ ಶಿಕ್ಷಣವನ್ನು ಮುಗಿಸಿ ತಂದೆ-ತಾಯಿಯ ಆಶಯದಂತೆ 1919ರಲ್ಲಿ ಐಸಿಎಸ್ (ಇಂಡಿಯನ್ ಸಿವಿಲ್ ಸರ್ವಿಸಸ್) ಪರೀಕ್ಷೆಯ ತರಬೇತಿಗಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಪರೀಕ್ಷೆಯಲ್ಲಿ 4 ನೇ ಸ್ಥಾನಗಳಿಸಿ ತೇರ್ಗಡೆ ಹೊಂದಿ ಕೆಲಸಗಿಟ್ಟಿಸಿಕೊಂಡರು.ನಂತರ ವಿದೇಶಿ ನೌಕರಿ ಬೇಡವೆಂದು ಅದನ್ನು ತ್ಯಜಿಸಿದರು.

ರಾಜಕೀಯ

   ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಹೊತ್ತು ತಾವು ನಂಬಿದ್ದ ನಿಲುವಿಗೆ ಬದ್ಧರಾಗಿ ರಾಷ್ಟ್ರ ಕಟ್ಟುವ ಕೆಲಸಕ್ಕೆ ಧುಮುಕಿದರು. ಬೋಸರ ಚಿಂತನೆಗಳೇ ಅತ್ಯಂತ ಶ್ಲಾಘನೀಯವಾವದ್ದು.ಇಂಗ್ಲೆಡ್, ಜರ್ಮನಿ, ಆಸ್ಟ್ರಿಯಾ ಹೀಗೆ ಹತ್ತು ಹಲವು ದೇಶಗಳಲ್ಲಿ ಮಿಂಚಿನ ಓಡಾಟ ನಡೆಸಿ ಸ್ವಾತಂತ್ರ ಹೋರಾಟದ ಅರಿವು ಮೂಡಿಸಿ,ಹೋರಾಟಕ್ಕೆ ತೀವ್ರತೆ ತಂದು ಕೊಟ್ಟರು.ಬೋಸರು ಶೀಘ್ರ ಸ್ವಾತಂತ್ರ ಪ್ರಾಪ್ತಿಗಾಗಿ ಪಡುತ್ತಿದ್ದ ಶ್ರಮ,ಅವರು ಮಂಡಿಸುತ್ತಿದ್ದ ವಾದಗಳು ಕಾಂಗ್ರೆಸ್ ನ ಕೆಲವು ಗುಂಪುಗಳ ಕೆಂಗಣ್ಣಿಗೆ ಗುರಿ ಮಾಡಿತು. ಅದರಿಂದ ಬೇಸತ್ತು ಬೋಸರು ಕಾಂಗ್ರೆಸ್ ತ್ಯಜಿಸಿದರು.
 ನಂತರ ಚಿತ್ತರಂಜನ್ ದಾಸ್ ರ ಸ್ವರಾಜ್ ಪಕ್ಷಕ್ಕೆ ಸೇರಿ 1923 ರಲ್ಲೀ ದಾಸ್ ಸ್ಥಾಪಿಸಿದ್ದ ಫಾರ್ವರ್ಡ್ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.ಕಾಲಕ್ರಮೇಣ 1927 ರ ನವೆಂಬರ್ ನಲ್ಲಿ ಬಂಗಾಳ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದರು.

ಹಾಗೆಯೇ 1933 ರಲ್ಲಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಅಧ್ಯಕ್ಷರಾದರು.ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ಪರ ಪ್ರಚಾರ ಮಾಡಿದರು,1937 ರಂದು ಭಾರತಕ್ಕೆ ಮರಳಿದರು.
 1938 ಫೆಬ್ರವರಿಯಲ್ಲಿ ಗುಜರಾತ್ ನ ಹರಿಪುರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಅನುಭವ ಹಂಚಿಕೊಂಡರು,ಬ್ರಿಟಿಷರ ಒಡೆದು ಆಳುವ ನೀತಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾಂಗ್ರೆಸ್ ಅಧ್ಯಕ್ಷಗಿರಿಗಾಗಿ  ಪಟ್ಟಾಭಿ ಸೀತರಾಮಯ್ಯ ಅವರ ವಿರುದ್ಧ  215 ಮತಗಳ ಅಂತರದಿಂದ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾದರು.ನಂತರ ಕಾಂಗ್ರೆಸ್ ನ ತಾರ್ಕಿಕ ನಡೆಗಳಿಂದ ಬೇಸತ್ತು ರಾಜೀನಾಮೆ ನೀಡಿ,ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಎಂಬ ಸ್ವಂತ ಪಡೆಯನ್ನು ಸ್ಥಾಪಿಸಿದರು.

ನೇತಾಜಿ ಮತ್ತು ಗಾಂಧೀಜಿ
  


   ಬೋಸ್ ಮತ್ತು ಗಾಂಧೀಜಿಯ ನಡುವೆ ಮಹತ್ವವಾದ ಭಿನ್ನಾಭಿಪ್ರಾಯವಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.ಆದರೆ ಬೋಸರು ಗಾಂಧೀಜಿಯನ್ನು ಭಾರತ ಸ್ವಾತಂತ್ರದ ಸರ್ವೋಚ್ಚ ನಾಯಕ ಎಂದೇ ಭಾವಿಸಿದ್ದರಲ್ಲದೇ ಅವರನ್ನು ಅಷ್ಟೇ ಗೌರವಿಸುತ್ತಿದ್ದರು.1939 ರಲ್ಲಿ ಬೋಸರು ಕಾಂಗ್ರೆಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದಾಗ ಗಾಂಧೀಜಿ ಅದನ್ನು ವಿರೋಧಿಸಿದ್ದರಿಂದ ಅವರ ಮಧ್ಯೆ ಬಿರುಕು ಉಂಟಾಯಿತು.ಬೋಸರು ಪತ್ರದ ಮೂಲಕ ಗಾಂಧೀಜಿಗೆ 'ನಿಮ್ಮ ಬಗ್ಗೆ ನನಗಿರುವ ಗೌರವ ಯಾರಿಂದಲೂ ಕಡಿಮೆ ಮಾಡಲು ಸಾಧ್ಯವಿಲ್ಲ' ಎಂದು ಬರೆದರು.ಇದು ಅವರ ದೊಡ್ಡತನಕ್ಕೆ ಹಿಡಿದ ಕೈಗನ್ನಡಿ.
 ಇನ್ನು ಬೋಸರು ಮತ್ತು ಗಾಂಧೀಜಿಯವರು ಪಾಲಿಸುತ್ತಿದ್ದ ತತ್ವ ಸಿದ್ಧಾಂತಗಳು ತದ್ವಿರುದ್ದವಾಗಿದ್ದವು.
ಬೋಸರು 1944 ಜುಲೈ 6 ರಂದು ಸಿಂಗಾಪುರ ದ ಆಜಾದ್ ಹಿಂದ್ ರೇಡಿಯೋ ಭಾಷಣದಲ್ಲಿ ಗಾಂಧೀಜಿಯವರಿಗೆ 'ರಾಷ್ಟ್ರಪಿತ ' ಎಂದು ಸಂಬೋಧಿಸಿದ್ದು ಹಾಗೂ ತಮ್ಮ ಸೇನೆಯ ಸ್ವಾತಂತ್ರ ಸಮರಕ್ಕೆ ಆಶೀರ್ವಾದ ಬಯಸಿದ್ದು ವಿಶೇಷವಾಗಿತ್ತು.ಈ ಮೂಲಕ ಮಹಾತ್ಮಾ ಗಾಂಧೀಜಿಯವರಿಗೆ 'ರಾಷ್ಟ್ರಪಿತ '  ಪದವು ಮೊದಲು ಬಳಕೆಯಾಗಿದ್ದು ಬೋಸರಿಂದ ಎಂಬುದು ಗಮನಾರ್ಹ ಸಂಗತಿ.

ಇಂಡಿಯನ್ ನ್ಯಾಷನಲ್ ಆರ್ಮಿ [ I N A ]- ಆಜಾದ್ ಹಿಂದ್ ಫೌಜ್
  


   ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಸೇನೆಯು ಆಗ್ನೇಯ ಏಷ್ಯಾಕ್ಕೆ ನುಗ್ಗಿತು.ಆಗ ಬ್ರಿಟಿಷ್ ಸೇನೆಯಲ್ಲಿ 40000 ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಸಮರ ಕೈದಿಗಳಾಗಿ ಬಂಧಿಸಲಾಗಿತ್ತು.ಇದನ್ನೇ ಬ್ರಿಟಿಷ್ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡ ಜಪಾನ್ ಸೇನೆಯು ಐಎನ್ಎ ನಿರ್ಮಾಣ ಮಾಡಿದರು.
ಮೊದಲ ಐಎನ್ಎ ಮೋಹನ್ ಸಿಂಗ್ ನೇತತ್ವದಲ್ಲಿ ರಚನೆಯಾಯಿತು. ನಂತರ ಸೇನೆಯೊಂದಿಗಿನ ಭಿನ್ನಾಭಿಪ್ರಾಯದಿಂದ  ಛಿದ್ರಗೊಂಡಿತು.


  ನಂತರ ಸುಭಾಷರ ನೇತೃತ್ವದಲ್ಲಿ ಆಜಾದ್ ಹಿಂದ್ ಫೌಜ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು  ಸಂಘಟಿಸುವುದರಲ್ಲಿ ರಾಸಬಿಹಾರಿ ಘೋಷರ ಶ್ರಮ ಅಪಾರವಾದುದು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಮಹಿಳಾ ಸೇನಾ ದಂಡ ನಾಯಕಿ ಆಗಿದ್ದರು.ಬೋಸರ ವಿವಾದಾತ್ಮಕ ವಿಮಾನ ದುರಂತದ ನಂತರ ಆಜಾದ್ ಹಿಂದ್ ಫೌಜ್ ಸಂಪೂರ್ಣ ವಾಗಿ ತನ್ನ ಕಾರ್ಯವನ್ನು ನಿಲ್ಲಿಸಿತು.

ಬೋಸರ ನಿಗೂಢ ಸಾವು


  ಬೋಸರ ಸಾವು ಅನೇಕರಲ್ಲಿ ಅನೇಕ ರೀತಿಯ ಸಂಶಯಗಳನ್ನು ಹುಟ್ಟು ಹಾಕಿದೆ. ಜಪಾನ್ ಸರ್ಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ 1945 ಆಗಸ್ಟ್ 18 ರಂದು ಟೋಕಿಯಾಕ್ಕೆ ಹೊರಟಿದ್ದ ವಿಮಾನ ಅಪಘಾತದಲ್ಲಿ ನಿಧನರಾದರೆಂದು ಹೇಳಲಾಗುತ್ತಿದೆ.

  ಬೋಸರು ಪ್ರಯಾಣಿಸುತ್ತಿದ್ದ ವಿಮಾನ ಹಾರಾಟ ಆರಂಭಿಸಿದ ತಕ್ಷಣ ನೆಲಕ್ಕೆ ಅಪ್ಪಳಿಸಿದೆ.ಆಗ ಬೋಸರು ತೀವ್ರ ಗಾಯಗೊಂಡರು.ಮಧ್ಯಾಹ್ನ ತೆಪೈನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಸಂಜೆ ಬೋಸರು ಮೃತಪಟ್ಟರು.ಆಗಸ್ಟ್ 22 ರಂದು ಬೋಸರ ಅಂತ್ಯ ಸಂಸ್ಕಾರ ನಡೆದಿದೆ ಎಂದು ವರದಿ ತಿಳಿಸಿದೆ. ಈ ರೀತಿ ಬೋಸರ ಸಾವಿನ ಬಗ್ಗೆ ಅನೇಕರಿಗೆ ಅನುಮಾನ ಮೂಡಿರುವುದು ಅಷ್ಟೆ ಸತ್ಯದ ಸಂಗತಿ.
ಇನ್ನು ಭಾರತ ಸರ್ಕಾರವು ನೇತಾಜಿಯ ನಿಗೂಢ ಸಾವಿನ  ತನಿಖೆಗೆ ಸಮಿತಿ ರಚಿಸಿ ವರದಿ ತಯಾರಿಸಿದೆ.

  

  ಭಾರತದ ಶಕ್ತಿ ಮತ್ತು ಸ್ಫೂರ್ತಿಯ ಸಹಕಾರ ಮೂರ್ತಿಯಾದ ನೇತಾಜಿಯವರ ನಿಸ್ವಾರ್ಥರಹಿತ ಸೇವೆ ಮತ್ತು ಅಪ್ರತಿಮ ಸ್ಪೂರ್ತಿಯನ್ನು ಗಮನಿಸಿದ ಕೇಂದ್ರ ಸರ್ಕಾರ 2021 ಜನವರಿ 23 ರಿಂದ ಪ್ರತಿ ವರ್ಷ ಜನವರಿ 23 ನ್ನು ಪರಾಕ್ರಮ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದೆ. ಅದಲ್ಲದೇ ದೇಶದ ಅತ್ಯಂತ ಹಳೆಯ ರೈಲು ಕಾಲ್ಕಾಮೇಲ್ ಅನ್ನು ನೇತಾಜಿ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿದೆ.ಹೀಗೆ ಸರ್ಕಾರವು ಕೂಡ ತನ್ನದೇ ಆದ ರೀತಿಯಲ್ಲಿ ನೇತಾಜಿಯ ಉತ್ತಮ ಸೇವೆಯನ್ನು ಗುರುತಿಸಿ,ಗೌರವ ಸಲ್ಲಿಸುತ್ತಿದೆ.
ಹೀಗೆ ಬೋಸರು ತಮ್ಮ ಕ್ರಾಂತಿಕಾರೀ ತತ್ವವನ್ನು ಮೈಗೂಡಿಸಿಕೊಂಡು ಎಲ್ಲೂ ರಾಜೀ ಮಾಡಿಕೊಳ್ಳದೇ ಸ್ವಾತಂತ್ರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಸ್ಮರಿಸುವ ಸಂಗತಿ.

ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
🔹ಅಭಿಷೇಕ.ಜೆ.ಎಂ 🔹

Twitter :- @abhish_jm
Instagram :- @abhish_jm







ಜೊತೆಗಿರದ ಜೀವ ಎಂದಿಗೂ ಜೀವಂತ !

   ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ.ತುಂಬಾ ದಿನಗಳಿಂದ ಅವರ ಬಗ್ಗೆ ಬರೆಯಬೇಕು ಅಂತ ಅನ್ನಿಸ್ತಿತ್ತು. ಅಷ್ಟೊಂದು ವಿಸ್ತಾರವಾಗಿ ಅಲ...