Sunday, June 20, 2021

"ನನ್ನ ಪ್ರೀತಿಯ ಪದ್ಮಪ್ಪಜ್ಜನಿಗೊಂದು ಅಂತಿಮ ವಿದಾಯ ಪತ್ರ..."

ನಮ್ಮಜ್ಜ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.ವಿಧಿ ವಿಧಾನಗಳ ಪ್ರಕಾರ ಎಲ್ಲ ಕಾರ್ಯಗಳು ಸುಸೂತ್ರವಾಗಿ ನೆರೆವೇರಿದವು.  ಬೆಳಿಗ್ಗೆ ಎದ್ದಾಕ್ಷಣ ಮನಸ್ಸು  ಯಾಕೋ ಭಾರ ಅನ್ಸ್ತು.ಅಜ್ಜನ ಬಗ್ಗೆ ಬರೀಬೇಕು ಅನ್ನಿಸ್ತು.
ನಂಗೆ ಅನ್ಸಿದ್ದನ್ನ ಈ ಬರಹದ ಮೂಲಕ ಅಜ್ಜನಿಗೆ ತಲುಪುತ್ತೆ ಎಂಬ ಕಿರುದಾಸೆಯೊಂದಿಗೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ಇದನ್ನು ಬರೆಯುತ್ತಿದ್ದೇನೆ.


ಶ್ರೀಯುತ ಭರಮಪ್ಪ-ತಿಪ್ಪಮ್ಮನವರ  ಪುತ್ರರಾಗಿ ಧರೆಗೆ ಬಂದ ನೀವು, ಸುಶೀಲಮ್ಮರವರನ್ನು ವರಸಿ,ಒಂಬತ್ತು ಜನ ಮಕ್ಕಳನ್ನು ಹೊತ್ತು ,ಇಪ್ಪತ್ತೊಂದು ಮೊಮ್ಮಕ್ಕಳನ್ನು ಸಾಕಿ ಸಲುಹಿ,ಹದಿನೇಳು ಮರಿಮೊಮ್ಮಕ್ಕಳನ್ನು ಕಂಡ ಅಪರೂಪದ ಜೀವ ನಿಮ್ದು.

ಹಲವು ವರ್ಷಗಳ ಕಾಲ ನಮ್ಮೂರಿನ ಬಸದಿಯಲ್ಲಿರುವ ಶ್ರೀ ಚಂದ್ರನಾಥ ತೀರ್ಥಂಕರರ ಸೇವೆ ಸಲ್ಲಿಸಿದ್ದು,
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರು ಹರಪನಹಳ್ಳಿಗೆ ಬಂದಾಗ ನೀವು ನಡೆದುಕೊಂಡೇ ಅಲ್ಲಿಗೆ ಹೋಗಿ ಅವರಿಗೆ ಬೆಂಬಲ ಸೂಚಿಸಿದ್ದು , ಎಂ ಪಿ ಪ್ರಕಾಶ, ಖ್ಯಾತ ರಂಗಭೂಮಿ ಕಲಾವಿದೆ ಸುಭದ್ರಮ್ಮ ಅವರೊಡನೆ ನಾಟಕವಾಡಿದ್ದು ಇಲ್ಲಿ ಸ್ಮರಿಸಬಹುದಾದ ಸಂಗತಿ. 

ಮಾಗಳದಲ್ಲಿ ಪಂಚಾಯ್ತಿ ಮಾಡಿ,ಎಲ್ಲ ಜನರ ಕಷ್ಟ-ಸುಖದಲ್ಲಿ ಭಾಗಿಯಾಗಿ,
ಎಲ್ಲರಿಗೂ ಒಳ್ಳೆಯದನ್ನೇ ಬಯಸೋ,  ಸದಾ ಕಷ್ಟಕ್ಕೆ ಮಿಡಿಯೋ ಹೃದಯ ನಿಮ್ದು.

ನಾವು ಚಿಕ್ಕವರಿದ್ದಾಗ ನಿಮ್ಮ ಹತ್ರ ಣಮೋಕಾರ ಮಂತ್ರ ಪಠಣೆ ಮಾಡೋದು,ಮಗ್ಗಿ ಹೇಳಿಸಿ ಕೊಂಡಿರೋದು  ಮರೆಯಲಾಗದ ಅನುಭವ.ನೀವು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ,ನಿಮ್ಮಲಿರುವ ಧಾರ್ಮಿಕ ಸಂಸ್ಕಾರವನ್ನು ರೂಢಿಸಿಕೊಂಡು ಮುನ್ನಡೆಯುತ್ತೇವೆಂಬ ಭರವಸೆಯನ್ನು ನಿಮಗೆ ನೀಡುತ್ತೇವೆ.

ಯಾವಾಗ್ಲೂ ಅಷ್ಟೆ ನಿಮ್ಮೊಂದಿಗೆ ಎಲ್ಲರೂ ಕುಳಿತಾಗ ಏನಾದ್ರೂ ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡು ಅದನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ರಿ,ಅದನ್ನ ನಾವೆಲ್ಲ ಇನ್ಮೇಲೆ ತುಂಬಾ ಮಿಸ್ ಮಾಡ್ಕೋತಿವಿ ಅಜ್ಜ.

ಇತ್ತೀಚಿಗೆ ಎಲ್ಲ ಮೊಮ್ಮಕ್ಕಳು ನಿಮ್ಮೊಂದಿಗೆ ಮಾತಾಡ್ತಾ ಕೂತಾಗ ನಾನು ನಿಮ್ಗೆ ಅಜ್ಜಿ ಹೆಂಗ್ ಅಜ್ಜ ಅಂತ ಕೇಳ್ದೆ ನೀವು ಅಜ್ಜಿನ "ರಾಜಮಾತೆ" ಅಂತ ಒಂದೇ ಪದದಲ್ಲಿ ವರ್ಣಿಸಿ ಬಿಟ್ರಿ .ಅದನ್ನ ಕೇಳಿ ನಾವೆಲ್ಲ ಮಂತ್ರ ಮುಗ್ಧರಾಗ್ಬಿಟ್ವಿ. ಅಂದಹಾಗೆ ನಮ್ ಅಜ್ಜಿ ನಿಜವಾಗ್ಲೂ "ರಾಜಮಾತೆಯೆ" ಬಿಡಿ..!

ಕೆಲ  ದಿನಗಳಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರಾದಾಗ ನಿಮ್ಮ ಸೇವೆ ಮಾಡಿದ ತೃಪ್ತಿ ನಮಗಿದೆ. ಆದರೆ ನೀವು ಬೇಗ ಗುಣಮುಖರಾಗಿ ಬರುತ್ತಿರಿ ಎಂಬ  ವಿಶ್ವಾಸ ನಮ್ಮಲ್ಲಿತ್ತು ನೀವು ಆ ವಿಶ್ವಾಸವನ್ನು ನಮ್ಮಲ್ಲಿ ತುಂಬಿದ್ರಿ ,ಆದ್ರೆ ನೀವು ಅದನ್ನು ಸುಳ್ಳಾಗಿಸಿದಿರಿ ಅಜ್ಜ.ಆ ನೋವು ನಮ್ಮಲ್ಲಿ ಇನ್ನೂ ಕಾಡ್ತಿದೆ.

ನಿಮ್ಮ ತೊಂಬೋತ್ತೆಳು ವರ್ಷಗಳ ಸುಖಿ ಜೀವನ ಸದಾ ನಮ್ಮ ನೆನಪಿನಲ್ಲಿರುತ್ತದೆ.ನೀವು ಹಾಕಿಕೊಟ್ಟ ದಾರಿಯಲ್ಲಿ ಸದಾ ಮುನ್ನಡೆಯುತ್ತೇವೆ ಎಂಬ ವಾಗ್ಧಾನವನ್ನು ನಿಮಗೆ ಈ ಮೂಲಕ ತಿಳಿಸುತ್ತಾ ,ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ..

ಅಂದಹಾಗೆ ಕೊನೆಕೊನೆಗೆ ನಿಮ್ಮ ಆರೋಗ್ಯ ತುಂಬಾ ಹದಗೆಡುತ್ತಿದ್ದಾಗ ಮದ್ಯಾಹ್ನದ ಸಮಯದಲ್ಲಿ ನೀವು ಮಲಗುವಾಗ ಸ್ವಲ್ಪ ಕಷ್ಟ ಪಟ್ರಿ ಆಗ ನಾನು ಜೈ ಜಿನೇಂದ್ರ  ಅಂದು ಮಲ್ಕೊ ಅಜ್ಜ ಅಂದೆ  ನೀವು ಜೈ ಜಿನೇಂದ್ರ ಅಂದು ನಿದ್ರೆಗೆ ಜಾರಿದ್ರಿ.ಆದರೆ ಕೊನೆಗೆ ಜೈ ಜಿನೇಂದ್ರ ಅಂತ ನಾನು ಅಂದೇ,ಆದ್ರೆ ನೀವು ಅನ್ಲೆ ಇಲ್ಲ ಅಜ್ಜ ,ಆಗ ದುಃಖ ಉಮ್ಮಳಿಸಿ ಬಂತು..

ಇರಲಿ ಅಜ್ಜ  ಹೋಗಿ ಬನ್ನಿ..
 ನಿಮ್ಮ ತೊಂಬತ್ತೇಳು ವರ್ಷಗಳ ಸುಧೀರ್ಘ ಪಯಣದಲ್ಲಿ ಕೆಲವು ವರ್ಷ ನಾವು ಕೂಡ ನಿಮ್ಮೊಂದಿಗೆ ಭಾಗಿಯಾಗಿದ್ದೇವು ಎಂಬುದೇ ನಮಗೊಂದು ಹೆಮ್ಮೆಯ ಸಂಗತಿ ಮತ್ತು ಅದು ನಮ್ಮ ಪುಣ್ಯ ಕೂಡ..
ನೆಮ್ಮದಿಯ ಜೀವನ ನಡೆಸಿದ ಮೆಣಸಿನಕಾಯಿ ಕುಟುಂಬದ "ಮಹಾಜ್ಞಾನಿ" ಗೆ ನಮ್ಮದೊಂದು 
ಅಂತಿಮ ನಮನ...

ಇಂತಿ ನಿಮ್ಮ ಪ್ರೀತಿಯ ಮೊಮ್ಮಗ
ಅಭಿಷೇಕ.ಜೆ.ಎಂ

No comments:

Post a Comment

ಜೊತೆಗಿರದ ಜೀವ ಎಂದಿಗೂ ಜೀವಂತ !

   ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ.ತುಂಬಾ ದಿನಗಳಿಂದ ಅವರ ಬಗ್ಗೆ ಬರೆಯಬೇಕು ಅಂತ ಅನ್ನಿಸ್ತಿತ್ತು. ಅಷ್ಟೊಂದು ವಿಸ್ತಾರವಾಗಿ ಅಲ...