ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ.ತುಂಬಾ ದಿನಗಳಿಂದ ಅವರ ಬಗ್ಗೆ ಬರೆಯಬೇಕು ಅಂತ ಅನ್ನಿಸ್ತಿತ್ತು. ಅಷ್ಟೊಂದು ವಿಸ್ತಾರವಾಗಿ ಅಲ್ಲದಿದ್ದರೂ ಗೊತ್ತಿರುವ ವಿಷಯವನ್ನೂ ನಿಮ್ಮ ಮುಂದೆ ಇಡುವ ಪುಟ್ಟ ಪ್ರಯತ್ನ.
ಪುನೀತ ರಾಜ್ ಕುಮಾರ್ ೧೯೭೫ ಮಾರ್ಚ ೧೭ ರಂದು
ನಟ ಸಾರ್ವಭೌಮ,ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಹಾಗೂ ವಜ್ರೇಶ್ವರಿ ಕಂಬೈನ್ಸ್ ನ ನಿರ್ಮಾತೃ ಪಾರ್ವತಮ್ಮ ರಾಜಕುಮಾರ್ ಅವರ ಸುಪುತ್ರನಾಗಿ ಜನಿಸಿದರು. ಇವರಿಗೆ ಇಬ್ಬರು ಸಹೋದರರು ಮತ್ತು ಸಹೋದರಿಯರಿದ್ದಾರೆ.
ಅಶ್ವಿನಿ ಅವರನ್ನು ವರಿಸಿದ ಇವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ.
ಇವರ ನಟನೆಯ ವಿಷಯಕ್ಕೆ ಬಂದರೆ ಇವರ ನಟನೆ, ನೃತ್ಯ ವೈಖರಿಗೆ ಎಲ್ಲರೂ ಮನಸೋತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನೆ ಶುರು ಮಾಡಿದ ಇವರು ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ಕಲೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪ್ರೀತಿಯ ಅಪ್ಪು ನಟನಾಗಿ ಅಲ್ಲದೇ ಹಾಡುಗಾರನಾಗಿ, ನಿರ್ಮಾಪಕನಾಗಿ ತಮ್ಮದೇ ಸ್ವಂತ PRK ಪ್ರೊಡಕ್ಷನ್ ಹೌಸ್ ಮೂಲಕ ಚಿತ್ರ ನಿರ್ಮಾಣ ಕೂಡ ಮಾಡುತ್ತಿದ್ದರಲ್ಲದೆ PRK ಆಡಿಯೋ ಕಂಪನಿ ಕೂಡ ಶುರುಮಾಡಿದ್ದರು.
ಮೊನ್ನೆ ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಮೃತಪಟ್ಟ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ.ಕರುನಾಡಿನ ಜನರು ಅವರ ಅಗಲಿಕೆಯಿಂದ ಕಂಗಾಲಾಗಿದ್ದರು. ಎಲ್ಲರಲ್ಲೂ ದುಃಖದ ಮನೆ ಮಾಡಿತ್ತು. ಏಷ್ಟೋ ದೂರದಿಂದ ಅಭಿಮಾನಿಗಳು ಅವರ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದರು.ಅವರ ಅಂತಿಮ ಸಂಸ್ಕಾರಕ್ಕೆ 20 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದರು ಎಂದು ಅಂದಾಜಿಸಲಾಗಿದೆ. ಅಲ್ಲಿ ನೆರೆದ ಜನರ ಸಂಖ್ಯೆ ಮಹಾತ್ಮ ಗಾಂಧೀಜಿ ಅವರ ಅಂತಿಮ ಸಂಸ್ಕಾರ ಬಿಟ್ಟರೆ ಇಡೀ ದೇಶದಲ್ಲಿ ಇವರ ಅಂತಿಮ ಸಂಸ್ಕಾರಕ್ಕೆ ಅಷ್ಟು ಜನ ಸೇರಿದ್ದರು ಎಂಬುದು ಗಮನಾರ್ಹ ಸಂಗತಿ.
ಕರ್ನಾಟಕ ಸರ್ಕಾರ ಅಚ್ಚುಕಟ್ಟಾಗಿ ಅವರ ಅಂತಿಮ ಸಂಸ್ಕಾರ ನಡೆಸಿ ಕೊಟ್ಟಿದೆ.ಸಹಕರಿಸಿದ ಎಲ್ಲ ಇಲಾಖೆ ಅವರಿಗೂ ಕೃತಜ್ಞತೆಗಳು ಸಲ್ಲುತ್ತವೆ.
ರಾಜ್ಯ ಸರ್ಕಾರ ಹನ್ನೆರಡು ವರ್ಷಗಳ ನಂತರ ಪ್ರಥಮ ಬಾರಿಗೆ ಮರಣೋತ್ತರವಾಗಿ ಪುನೀತ್ ರಾಜಕುಮಾರ್ ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಕೊಡಲು ನಿರ್ಧರಿಸಿದೆ. "ಪದ್ಮಶ್ರೀ" ಪ್ರಶಸ್ತಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕೂಡ ಮಾಡಿದೆ. ಇವೆಲ್ಲ ಅವರ ಕಾರ್ಯಕ್ಕೆ ಸಂದ ಗೌರವ ಎಂದರೆ ತಪ್ಪಾಗಲಾರದು.
ಇನ್ನು ಅವರ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ. ಅವರು ನಡೆಸುವ ಶಕ್ತಿಧಾಮ ಆಶ್ರಮದಲ್ಲಿ ೧೮೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.೧೯ ಗೋ ಶಾಲೆ, ಅನಾಥಾಶ್ರಮ ಅಲ್ಲದೇ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಈಗ ಇವುಗಳನ್ನು ಅವರ ಸಹೋದರ ಶಿವರಾಜ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ.ಅವರಿಗೆ ಶಕ್ತಿ ತುಂಬುವ ಕೆಲಸ ಅವರ ಇಡೀ ಕುಟುಂಬ ಮಾಡುತ್ತಿದೆ.
ಅವರ ಸಾವು ಕರ್ನಾಟಕದ ಜನರಿಗೆ ನೋವುಂಟು ಮಾಡಿರುವುದು ಅಷ್ಟೇ ಸತ್ಯ. ಈಗಲೂ ಕೂಡ ಅವರ ಸಮಾಧಿಗೆ ಜನರು ಸಾಲು ಗಟ್ಟಿ ನಿಂತು ಅವರ ದರ್ಶನ ಪಡೆಯುತ್ತಿದ್ದಾರೆ. ಯಾವುದೇ ಊರಿಗೆ ಹೋದರೂ ಅವರ ಭಾವಚಿತ್ರಗಳು ಕಾಣಸಿಗುತ್ತವೆ.ಫೋಟೋ ಸ್ಟುಡಿಯೋ, ಕಾರ್,ಬೈಕ್ ಹಾಗೂ ಮನೆಗಳಲ್ಲಿ ಅವರ ಭಾವ ಚಿತ್ರವನ್ನಿಟ್ಟುಕೊಂಡು ಅವರ ಮೇಲಿನ ಪ್ರೀತಿಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.ಏಷ್ಟೋ ಜನ ಬೈಕ್, ಸೈಕಲ್ ಮೂಲಕ ಅವರ ಮನೆಗೆ ಬಂದು ತಮ್ಮ ನೋವನ್ನು ಅವರ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಈಗಿನ ಪ್ರಚಾರ ಪ್ರಿಯ ಪ್ರಪಂಚದಲ್ಲಿ ಮಾಡಿದ ಸಣ್ಣಪುಟ್ಟ ಕೆಲಸಕ್ಕೂ ಮನ್ನಣೆ ಸಿಗಬೇಕೆಂದು ಆಸೆ ಪಡುವವರ ಮಧ್ಯೆ ಅವರು ಜೀವಂತವಿದ್ದಾಗ ಯಾರಿಗೂ ಗೊತ್ತಿರದ ರೀತಿಯಲ್ಲಿ ಅವರು ಮಾಡಿದ ಸಾಮಾಜಿಕ ಕಾರ್ಯಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿವೆ.ನಾವು ಕೂಡ ಇದನ್ನು ಅವರಿಂದ ಕಲಿಯಬೇಕಾಗಿದೆ.
ಅಪ್ಪು ಏಷ್ಟೋ ಸಲ ನಾನು ನಿಮ್ಮ ಕೆಲವು ವೀಡಿಯೋಗಳನ್ನು ನೋಡಿದಾಗಲೆಲ್ಲ ಕಣ್ಣಂಚಲ್ಲಿ ನೀರು ತುಂಬಿ ಬರುತ್ತದೆ.ಭಗವಂತ ನಿಮ್ಮನ್ನು ಇಷ್ಟು ಬೇಗ ಕರೆದುಕೊಂಡು ಬಿಟ್ಟ ಆ ನೋವು ಇನ್ನೂ ನಮ್ಮನ್ನ ಕಾಡುತ್ತಿದೆ.ನೀವು ಜೀವಂತವಿದ್ದಾಗ ನಿಮ್ಮ ಅಭಿಮಾನಿಗಳ ಸಂಖ್ಯೆ ಏಷ್ಟಿತ್ತೋ ಗೊತ್ತಿಲ್ಲ ಆದರೆ ನಿಮ್ಮ ಅಗಲಿಕೆಯ ನಂತರ ಕೋಟ್ಯಂತರ ಅಭಿಮಾನಿಗಳನ್ನ ನೀವು ಸಂಪಾದಿಸಿದ್ದಿರಿ ಅದರಲ್ಲಿ ನಾನು ಕೂಡಾ ಒಬ್ಬ.
ಇರಲಿ ಅಪ್ಪು ಹೋಗಿ ಬನ್ನಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.ನೀವು,ನಿಮ್ಮ ನಗು ನಮ್ಮ ಮನದಲ್ಲಿ ಸದಾ ಜೀವಂತವಾಗಿ ನೆಲೆಸಿರುತ್ತದೆ.
- ಅಭಿಷೇಕ. ಜೆ. ಎಂ